Tuesday, February 12, 2008

ಅಣಕು ಗೀತೆ ... ಮಿಂಚಾಗಿ ನೀನು ಬರಲು

( ಜಯಂತ್ ಕಾಯ್ಕಿಣಿಯವರ ಕ್ಷಮೆ ಕೋರಿ.. )
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ
ಬೆಚ್ಚನೆ ಹೊದಿಕೆ ಇರಲು, ಕೂತಲ್ಲಿಯೆ ಚಳಿಗಾಲ
ಪವರ್ ಕಟ್ ಶುರುವಾಗಲು, ಮತ್ತದೆ ಬೇಸಿಗೆಕಾಲ
ಇನ್ನೆಲ್ಲಿದೆ ನನ್ನ ನಿದ್ದೆಗೆ ಉಳಿಗಾಲ????
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..
.
ನಾ Bescom Power ಗೆ ಚಂದಾದಾರನು
Fan ಗಾಳಿ ಬೀಸದೆ ನಾ ಮಲಗಲಾರೆನು
ನಾ ಸೊಳ್ಳೆಯ ಹಸಿವೆಗೆ ಆಹಾರವಾದೆನು
ಸೊಳ್ಳೆಯ ಕಂಡ ಕ್ಷಣದಲೆ ಹೆದರಿ ಹೋದೆನು
ಕ್ಷಮಿಸು ನೀ ಕಿರಿಕಿರಿ, ಕೊಲ್ಲಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನೀನು.
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..
.
ನನ್ನ ಮನಕೆ ನೋವು ಕೊಡುವ ನೀನು ಮೋಸಗಾರ
ಕನ್ನ ಕೊರೆದು ದೋಚಿ ಕೊಂಡ ರಕ್ತಕ್ಕೆ ನೀನೆ ಹೊಣೆಗಾರ
ನನ್ನದೀ ವೇದನೆ ಯಾರಿಗೂ ನಾ ಹೇಳೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನೀನು.
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..

Thursday, July 26, 2007

ನೋಡಿ ಸ್ವಾಮಿ ನಾವಿರೋದೆ ಹೀಗೆ ...


ಆ ಕತ್ತೆಗಳನ್ನ ನೋಡಿ ಸ್ವಾಮಿ, ಅವು ಸರಸ-ಸಲ್ಲಾಪ ಮಾಡ್‍ತ್ತಿದ್ದಾವೆ ಅಂತ ಅನಿಸುತ್ತದ? ಅದರ ಪಾಡಿಗೆ ದೂರ ದೂರ ಮಲಗಿಕೊಂಡಿದೆ/ಕುಳಿತುಕೊಂಡಿದೆ. ಈ ತರ ದೂರ ದೂರ ಮಲಗಿಕೊಂಡು/ಕುಳಿತುಕೊಂಡು ಸರಸ-ಸಲ್ಲಾಪ? ನನಗಂತು ಗೊತ್ತಿಲ್ಲ. Photo ತೆಗೆದವರಿಗೆ ಗೊತ್ತಿರ್‍ ಬಹುದು.
.
ಕತ್ತೆಗಳಿಗೆ ಏನಾದರು Paper ನವರು ಈ ತರ Photo ಹಾಕಿದ್ದಾರೆ ಅಂತ ಗೊತ್ತಾದ್ರೆ, ಮಾನನಷ್ಟ ಮೊಕದ್ದಮೆ ಹಾಕಿದ್ರು ಹಾಕ್‍ಬಹುದು. ಇಲ್ಲಾಂದ್ರೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಸುಮ್ಮನಿದ್ರು ಇರ್‍ಬಹುದು.
.
Photo ನ ಸ್ವಲ್ಪ ಗಮನಿಸಿ ನೋಡಿ, ಅಲ್ಲಿ ಓಟ್ಟು ಎಷ್ಟು ಕತ್ತೆಗಳಿವೆ ಅಂತ ಹೇಳ್ತೀರ?

Wednesday, June 27, 2007

ಎಲ್ಲರಂತವಳಲ್ಲ ...

ಮುಂಜಾನೆ ಅರಳುವ ತಾವರೆಯಂತವಳು

ಪರಿಮಳ ಸೂಸುವ ಮಲ್ಲಿಗೆಯಂತವಳು

ತುಟಿಯಂಚಲೆ ತುಂಟ ನಗು ಬೀರುವಂತವಳು

ಎಲ್ಲರಂತವಳಲ್ಲ ನನ ತಂಗಿ

.

ಪ್ರಶ್ನೆಗಳಿಗೆ ಮೌನದಲೆ ಉತ್ತರಿಸುವಂತವಳು

ಬಾಯಿ ತೆರೆದರೆ ಮುತ್ತನೆ ಉದುರಿಸುವಂತವಳು

ಕಣ್ಣ ನೋಟದಲೆ ನನ್ನ ಗದರಿಸುವಂತವಳು

ಎಲ್ಲರಂತವಳಲ್ಲ ನನ ತಂಗಿ

.

ಕೈಗಳೇ ಸೋತರು, ಹೃದಯವೇನು ಸೋತಿಲ್ಲ

ನೋವನೇ ತಿಂದರು, ನಗುದನೇನು ಮರೆತಿಲ್ಲ

ಕಷ್ಟವೇ ಬಂದರು, ಉತ್ಸಾಹವೇನು ಕುಗ್ಗಿಲ್ಲ

ಎಲ್ಲರಂತವಳಲ್ಲ ನನ ತಂಗಿ

.

ಜೊತೆಗೇನು ಹುಟ್ಟಿಲ್ಲ, ಜೊತೆಗೇನು ಬೆಳೆದಿಲ್ಲ

ಹಂಚಿಕೊಂಡ ಭಾವನೆಗಳ ನೆನಪಿನ್ನು ಮಾಸಿಲ್ಲ

ಜೊತೆಯಲೇ ಇರಬೇಕೆಂಬ ತವಕವಿನ್ನು ಬತ್ತಿಲ್ಲ

ಎಲ್ಲರಂತವಳಲ್ಲ ನನ ತಂಗಿ

.

ಮಮತೆಯನೆ ಉಣಬಡಿಸುವಂತವಳು

ನನ್ನ ಕೈ ಹಿಡಿದು ನಡೆಸುವಂತವಳು

ನನಗೆ ತಾಯಿಯಂತವಳು

ಎಲ್ಲರಂತವಳಲ್ಲ ನನ ತಂಗಿ

ಪರ್ವ ...

ಬೈರಪ್ಪನವರ ಕೃತಿ 'ಪರ್ವ' ಓದಿ ಮುಗಿಸಿದ ಮೇಲೂ ಕೆಲವು ದಿನ ಅದೇ ಗುಂಗಿನಲ್ಲಿದ್ದೆ. ಈಗ ಆ ನಶೆ ಇಳಿದು, ಪರ್ವದಲ್ಲಿ ಬರುವ ಪಾತ್ರಗಳ ನೆನಪು ಒಂದೊಂದಾಗಿ ಮಾಸಿ ಹೋಗುತ್ತಿದೆ. ಅದು ಪೂರ್ತಿ ಅಳಿಸಿ ಹೋಗುವ ಮೊದಲು ನನ್ನ ಚಿಂತನೆಗಳನ್ನು ದಾಖಲಿಸಲು ಹೊರಟಿದ್ದೇನೆ.
.
ಕೃತಿಯ ಬಗ್ಗೆ ಬರೆಯುವ ಮೊದಲು ಮಹಾಭಾರತವೆಂಬ ವಿಶಾಲವಾದ ಗ್ರಂಥ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಬೀರಿದ ಪ್ರಭಾವದ ಬಗ್ಗೆ ಕಿರು ಪರಿಚಯ. ಕನ್ನಡದಲ್ಲಿ ಮೊದಲಿಗೆ ಮಹಾಭಾರತವನ್ನು ಬರೆದವನು ಆದಿಕವಿ ಪಂಪ. ಗದ್ಯ ಮತ್ತು ಪದ್ಯ ರೂಪದಲ್ಲಿ ಬರೆಯಲ್ಪಟ್ಟ 'ವಿಕ್ರಮಾರ್ಜುನ ವಿಜಯ' ಉತ್ತಮ ಕೃತಿ ಎಂದು ಪರಿಗಣಿಸಲ್ಪಟ್ಟಿದೆ. ಇದೇ ಸಮಯದಲ್ಲಿ ಬಂದ ರನ್ನನ 'ಗದಾ ಯುದ್ದಂ' ಭೀಮ ಮತ್ತು ಧುರ್ಯೊದನರ ಗದಾ ಯುದ್ದದ ಕುರಿತಾಗಿದೆ. ಕುಮಾರವ್ಯಾಸನ 'ಗದುಗಿನಭಾರತ' ಹೆಣ್ಣಿನ ಸೌಂದರ್ಯವನ್ನು ವರ್ಣಿಸುವ ಅವನ ರಸಿಕತೆಗೆ ಹೆಸರಾಗಿದೆ.
.
ಆಧುನಿಕ ಕನ್ನಡದಲ್ಲಿ ಬಂದ ಕೃತಿಗಳೆಂದರೆ ಎ.ಅರ್ ಕೃಷ್ಣಶಾಸ್ತ್ರಿಗಳ 'ವಚನ ಭಾರತ' ಮತ್ತು ಬೈರಪ್ಪನವರ 'ಪರ್ವ'. ಇವೆಲ್ಲ ಮುಖ್ಯ ಕಥೆಯನ್ನು ಆದರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ಉಪಕತೆಗಳನ್ನು ಅದರಿಸಿ ರಚಿಸಿದ ಕೃತಿಗಳೂ ಅನೇಕ. ಕುವೆಂಪು ಅವರ 'ಬೆರಳ್‍ಗೆ ಕೊರಳ್', ಬಿ.ಎಮ್ ಶ್ರೀಯವರ 'ಗದಾಯುದ್ದಂ', ಗೀರಿಶ್ ಕಾರ್ನಾಡ ಅವರ 'ಯಾಯತಿ' ಇತ್ಯಾದಿ ಉಪಕತೆಗಳನ್ನು ಆದರಿಸಿ ಬರೆದ ಕೃತಿಗಳು.
.
ಕೇವಲ ಉಪಕಥೆಗಳನ್ನು ಮಾತ್ರ ವಿಸ್ತರಿಸದೆ ಮಹಾಭಾರತಲ್ಲಿ ಬರುವ ೧೮ ಪರ್ವಗಳನ್ನೂ ವಿವರವಾಗಿ ಬಿಚ್ಚಿಡುವ ಬೈರಪ್ಪನವರ 'ಪರ್ವ' ಸಾಮಾನ್ಯ ವರ್ಗಕ್ಕೆ ಸೇರದ ಒಂದು ವಿಭಿನ್ನ ಕೃತಿ. ಬಹುಶಃ ಮಹಾಭಾರತದಲ್ಲಿನ ಪಾತ್ರಗಳ ಸ್ಥೂಲ ಪರಿಚಯವಿಲ್ಲದೆ ಈ ಕೃತಿಯ ಸವಿಯನ್ನು ಸವಿಯುವುದು ಕಷ್ಟವಾದೀತು. ಓದುಗನನ್ನು ಭೂತಕಾಲಕ್ಕೆ ಕೊಂಡೊಯ್ಯವ ಬೈರಪ್ಪನವರ ಕಲೆ ಅತ್ಯದ್ಬುತ.
.
ಪರ್ವದಲ್ಲಿ ಗಮನ ಸೆಳೆದ ಅಂಶವೆಂದರೆ 'ನಿಯೋಗ'. ಅಂದಿನ ಕಾಲದಲ್ಲಿ ಸಂತಾನ ಉತ್ಪತ್ತಿಗೆ ಎಲ್ಲರಿಂದಲೂ ಸ್ವೀಕರಿಸಲ್ಪಟ್ಟ ಪದ್ದತಿಯಾಗಿತ್ತು. ಗಂಡ ಶಕ್ತನಲ್ಲದಿದ್ದರೆ ವಂಶ ಮುಂದುವರೆಸಲು ಇನ್ನೊಬ್ಬನಿಂದ ವೀರ್ಯ ದಾನ ಪಡೆಯುವುದೇ ಈ ಪದ್ದತಿ. ನಿಯೋಗ ಪದ್ದತಿ ಧರ್ಮಸೂಕ್ಷ್ಮ ವಿಷಯವೆನಿಸುತ್ತದೆ. ಕುಂತಿ ನಿಯೋಗದಿಂದ ಪಡೆದ ಪಾಂಡವರಾಗಲಿ ಅಥವ ಕರ್ಣನಾಗಲಿ ವರಪುತ್ರರಲ್ಲ. ಬಹುಶಃ ಈಗಿನ ಮಡಿವಂತರಿ ಇದನ್ನು ಅರಗಿಸಿಕೊಳ್ಳುವುದು ಕಷ್ಟವೆನಿಸಬಹುದು.
.
ಪತಿವೃತೆಯೆಂದು ಕಣ್ಣಿಗೆ ಪಟ್ಟಿ ಕಟ್ಟಿ ಕೊಂಡ ಗಾಂಧಾರಿ ಹಸ್ತಿನಾವತಿಯ ಜನರಿಗೆಲ್ಲ ಪರಮ ಸ್ವಾದಿ. ಕುಂತಿಗೆ ರಾಜ ವೈಭವಗಳಿದ್ದರೂ, ವಯಸ್ಸಿಗೆ ಸಹಜವಾದ ಕಾಮನೆಗಳಿದ್ದರೂ ಪುರುಷತ್ವವನ್ನು ಕಳಕೊಂಡ ಪತಿ ಮಾತ್ರ ಅಶಕ್ತ. ಹುಟ್ಟು ಕುರುಡನಾದರು ಧೃತರಾಷ್ಟ್ರ ತನ್ನ ಕಾಮಾಗ್ನಿಯನ್ನು ಆರಿಸಲು ಬಳಸಿಕೊಳ್ಳುತ್ತಿದದ್ದು ದಾಸಿಯವರನ್ನ. ಯೌವನದ ಪ್ರಾರಂಭಿಕ ಹಂತದಲ್ಲೆ ಅತಿಯಾದ ಕಾಮಕೇಳಿಯಿಂದ ಪುರುಷತ್ವವನ್ನು ಕಳಕೊಂಡ ಪಾಂಡು, ಪುರುಷತ್ವವನ್ನು ಮರಳಿ ಪಡೆಯಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥ. ಕ್ಷತ್ರಿಯರೆಲ್ಲ ಸ್ತ್ರೀಲೋಲುಪರೆಂದೆ ಬೈರಪ್ಪನವರ ಕೃತಿ ಹೇಳುತ್ತದೆ.
.
ಪಾಂಡವರಲ್ಲಿ ಭೀಮ ಮತ್ತು ಅರ್ಜುನ ಬಲಿಷ್ಠರು. ಧರ್ಮರಾಯ ಧರ್ಮಕ್ಕೆ ಕಟ್ಟು ಬೀಳುವ ಜಾಯಮಾನದ ಶಕ್ತಿಹೀನ ರಾಜ. ಭೀಮನದು ಧರ್ಮಕ್ಕೆ ಕಟ್ಟು ಬೀಳದ ಜಾಯಮಾನ. ಭೀಮನಿಗೆ ಅಣ್ಣನ ಮೇಲೆ ಯಾವಾಗಲು ಸಿಟ್ಟು. ಅರ್ಜುನ ಅಹಂಕಾರದ ಅಪ್ರತಿಮ ಬಿಲ್ಲುಗಾರ, ರಸಿಕ, ದ್ರೌಪದಿಯ ಪ್ರೀತಿಯನ್ನು ಆರಂಭದಲ್ಲಿ ಗಳಿಸಿಯೂ ಉಳಿಸಿಕೊಳ್ಳಲಾರದವನು, ಅಣ್ಣ ಧರ್ಮನ ಮಾತನ್ನು ಮೀರದವನು. ನಕುಲ ಸಹದೇವರನಂತೂ ಬೈರಪ್ಪನವರು ಮರೆತಂತಿದೆ. ದ್ರೌಪದಿಯ ಮತ್ತು ಭೀಮ ಸಮಾನ ಮನಸ್ಕರು. ಯಾವ ಕ್ಲಿಷ್ಟ ಕಾಲದಲ್ಲಾದರು ದ್ರೌಪದಿಗೆ ಸಹಾಯಕ್ಕೆ ಬರುವವನು ಭೀಮ. ದ್ರೌಪದಿಯಗೆ ಅವಳ ರೂಪವೇ ಶತ್ರು. ಹಸಿದ ಹೆಬ್ಬುಲಿಗಳಂತಿರುವ ಐವರು ಗಂಡಂದಿರ ಮದ್ಯೆ ಸಿಕ್ಕಿ ಶಯಾನಾಗಾರದಲ್ಲಿ ನರಳುವ ಅವಳ ಬಗ್ಗೆ ಕನಿಕರ ಮೂಡುತ್ತದೆ.
.
ಕೃಷ್ಣ ಎಲ್ಲದಕ್ಕು ಸೂತ್ರದಾರ. ಅವನಿಗೆ ಎಲ್ಲ ದೇಶದ ರಾಜ ಕಾರಣಗಳೂ ಬೇಕು. 'ಪರ್ವ' ದಲ್ಲಿ ಕೃಷ್ಣ ದೇವರಲ್ಲ. ಅವನೊಬ್ಬ ಕ್ಷತ್ರಿಯ ಅಷ್ಟೇ. ಜಯದ್ರಥನಿಗೆ ಹೆದರಿ ಮಥುರೆಯಿಂದ ದ್ವಾರೆಕೆಗೆ ಹೋಗುವಾಗ ಎಲ್ಲರ ಕೈಯಿಂದಲು ಛೀಮಾರಿ ಹಾಕಿಸಿಕೊಳ್ಳುತ್ತಾನೆ. ಆದರೆ ಸಮಯವರಿತು ಶತ್ರುವಿನ ಮೇಲೆ ಎರಗುವ ಅವನ ಯುದ್ದ ಕೌಶಲ್ಯ ಮೆಚ್ಚುವಂತಹುದು. ಬಲರಾಮನಿಗೆ ಕೌರವರ ಮೇಲೆ ಕಾಣದ ಕನಿಕರ. ಅದಕ್ಕೇ ಕೃಷ್ಣ ಮತ್ತು ಬಲರಾಮರಿಗೆ ಯಾವಾಗಲು ಶೀತಲ ಸಮರ.
.
ದುರ್ಯೋದನನಿಗೆ ಪಾಂಡವರನ್ನು ಕಂಡರೆ ಏನೋ ಹೊಟ್ಟೆಕಿಚ್ಚು. ಪಾಂಡವರೆಲ್ಲ ನಿಯೋಗದಿಂದ ಹುಟ್ಟಿದವರಾದ್ದರಿಂದ ಕುರುವಂಶದ ರಾಜ ನಾನೆಂಬ ಅಹಂಕಾರ. ಅದನ್ನೆ ಯುದ್ದದ ಸಮಯದಲ್ಲಿ ಹೇಳಿ, ನನ್ನದೆ ಧರ್ಮದ ಪಕ್ಷವೆಂದು ಎಲ್ಲ ರಾಜರ ಸಹಾಯ ಕೇಳುತ್ತಾನೆ.
.
ಕರ್ಣ ಮತ್ತು ದುರ್ಯೋದನ ಪ್ರಾಣ ಸ್ನೇಹಿತರು. ತನ್ನ ಹುಟ್ಟಿನ ರಹಸ್ಯವನ್ನು ಕೃಷ್ಣನಿಂದ ತಿಳಿದ ಮೇಲೆ ಅವನ ಮನಸ್ಸು ತಳಮಳಗೊಳ್ಳುತ್ತದೆ. ತಾನು ಕೌರವರ ಜೊತೆ ಮುಂದುವರಿಯ ಬೇಕೇ, ಇಲ್ಲ ಪಾಂಡವರನ್ನು ಸೇರಿಕೊಳ್ಳಲೇ, ಇಲ್ಲ ಎಲ್ಲವನ್ನು ಬಿಟ್ಟು ವನವಾಸ ಮಾಡಲೇ? ಕರ್ಣ ಹೋದಲ್ಲೆಲ್ಲ ಅವನನ್ನು ಹಿಂಬಾಲಿಸುವ ಅವನ ನಾಯಿ, ಗಮನ ಸೆಳೆಯುತ್ತದೆ. ಕುಂತಿ ಬಂದು, ಪಾಂಡವರೆಲ್ಲ ನಿನ್ನ ತಮ್ಮಂದಿರು, ನೀನು ಅವರನ್ನು ಸೇರು ಎಂದಾಗ ಕರ್ಣನದ್ದು ಸ್ಪಷ್ಟ ಉತ್ತರ. ಕರ್ಣ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕುಂತಿ ಮೌನಿಯಾಗುತ್ತಾಳೆ. ಕುಂತಿಯ ಪಾದಗಳಿಗೆ ನಮಸ್ಕರಿಸಿದ ಕರ್ಣನ ಕಣ್ಣುಗಳಲ್ಲಿ ಕಣ್ಣೀರು. ಕುಂತಿ, ಕರ್ಣನನ್ನು ಸಾಕಿ ಸಲಹದಿದ್ದರೆನಂತೆ ಜನ್ಮಕೊಟ್ಟದ್ದು ಕಡಿಮೆಯೇ?
.
ಮುಂದುವರಿಯುತ್ತದೆ ......
.
ನಾನು ಬರಿದಿರುವುದು ನಿಮ್ಮ ಚಿಂತನೆಗೆ ಗ್ರಾಸವಾಗುವಂತಿದ್ದ'ರೆ' ನಿಮ್ಮ ಅನಿಸಿಕೆ ಯನ್ನು ಬರೆಯಿರಿ.


ಏಕಾಂತ ದೂರವಾಗಿಸಿದವರು ... Web Counter